ಸೋಮವಾರ, ಅಕ್ಟೋಬರ್ 6, 2014

ಭಾರತೀಯ ನ್ಯಾವಿಗೇಷನ್ ಸಿಸ್ಟಮ್

ನಾನು ಅಂಕಣ ಬರೆಯುಲು ಪ್ರಾರಂಭಿಸಿದ ಮೂಲ ಉದ್ದೇಶ ಇವತ್ತು ತಕ್ಕ ಮಟ್ಟಿಗೆ ಪೂರೌಸುವ ಪ್ರಯತ್ನ ಮಾಡುತಿದ್ದೇನೆ. ಇಲ್ಲಿಯವರೆಗು ಪ್ರವಾಸ ಕಥನಗಳನ್ನು ಬರೆಯುತ್ತಿದ್ದ ನಾನು ಮೊದಲ ಬಾರಿಗೆ ಒಂದು ವೈಜ್ಙಾನಿಕ ಅಂಕಣ ಬರೆಯುವ ಯತ್ನ ಮಾಡಿದ್ದೇನೆ. 


ನಮ್ಮ ಇವತ್ತಿನ ಸ್ಮಾರ್ಟ್ಫೋನ್ ಜ಼ಮಾನದಲ್ಲಿ ದಿಕ್ಸೂಚಿ ನೆರವು ಕೊಡುವ ವ್ಯವಸ್ಥೆ ಎಲ್ಲರಿಗು ತಿಳಿದಿರೋದೆ. ಹಲವು ಬಾರಿ ಆ ಸೌಲಭ್ಯ ಇಲ್ಲದಿದ್ದರೆ ನಮ್ಮ ಪ್ರಯಾಣ ಗೊಂದಲಮಯವಾಗುವ ಸಾಧ್ಯತೆಯೂ ಇದೆ. ಹಲವಾರು ಕಾರಣಾಗಳಿಂದ ಮತ್ತೊಬ್ಬ ವ್ಯಕ್ತಿಯನ್ನು ನಂಬಿ ದಾರಿ ಕೇಳೋದು ನಮಗೆ ಕಷ್ಟವಾಗಿದೆ. ಸಾಮಾನ್ಯ ಜನರು ಮಾತ್ರ ಇಂಥಃ ವ್ಯವಸ್ಥೆಯ ಮೇಲೆ ಅವಲಂಬಿಸಿಲ್ಲ, ಹಲವು ರಾಷ್ಟ್ರೀಯ ಸಂಸ್ಥೆಗಳು, ಸೈನಿಕ ದಳಗಳು ಕೂಡ ಅವಲಂಬಿಸಿವೆ. ನಮ್ಮ ಭಾರತ ದೇಶವು ಸಧ್ಯಕ್ಕೆ ಈ ಅನುಕೂಲ ವದಗಿಸಲು ಬೇರೆ ಬೇರೆ ರಾಷ್ಟ್ರಗಳಿಂದ ಮಾಹಿತಿಯನ್ನು ಪಡೆಯುತ್ತಿದೆ. ಕೆಲವು ಸೂಕ್ಷ್ಮ ಕ್ಷಣಗಳಲ್ಲಿ, ತುರ್ತು ಸಮಯಗಳಲ್ಲಿ ಮಾಹಿತಿ ಸಿಗಿವುದು ತಡವಾಗಬಹುದು ಕೆಲವೊಮ್ಮೆ ದುಬಾರಿಯೂ ಆಗಬಹುದು, ನಮಗೆ ಬೇಕಾದ ಮಾಹಿತಿ ದೊರಕದೇ ಪರದಾಡಬೇಕಾಗಬಹುದು. ಇದೆಲ್ಲ ಅಂಶಗಳನ್ನು ಗಣನೆಯಲ್ಲಿಟ್ಟುಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಐಆರ್‌ಎನ್‌ಎಸ್‌ಎಸ್ ಸರಣಿ ಉಪಗ್ರಹಗಳನ್ನ ರೂಪಿಸಿದೆ. ಈ ಸರಣಿಯಲ್ಲಿ ಏಳು ಉಪಗ್ರಗಳಿದ್ದು ಅವು ನಿರ್ದಿಷ್ಟ ಆಕಾರದಲ್ಲಿ, ಬೇರೆ ಬೇರೆ ಕಕ್ಷೆಗಳಲ್ಲಿ ಕೆಲಸ ಮಾಡಲಿವೆ. ಭಾರತದ ಸುತ್ತಲೂ ಸುಮಾರು ೧೫೦೦ ಕಿ.ಮೀ. ವರೆಗು ಗಮನಿಸುವಾ ಉಪಗ್ರಹಗಳಿಗೆ ಹೆಚ್ಚಿನ ದೃಶ್ಯಸಾಂದ್ರತೆಯಿದ್ದು ನಿಖರವಾಗಿ ೧೦ ಮೀ ಗಿಂತ ಚಿಕ್ಕ ಸ್ಥಳಗಳನ್ನು ಗಮನಿಸಬಹುದಾಗಿದೆ. ಐಆರ್‌ಎನ್‌ಎಸ್‌ಎಸ್ ಉಪಗ್ರಹಗುಚ್ಚ ಎರಡು ಪ್ರಮುಖ ಉದ್ದೇಶಗಳನ್ನು ಪೂರ್ಣಗೋಳಿಸಲಿವೆ. 
೧. ಉತ್ತಮ ಸ್ಥಾನ ನಿರ್ಧಾರಣಾ ವ್ಯವಸ್ಥೆ - ಇದು ಸಾಮಾನ್ಯ ಜನತೆಗೆ. 
೨. ನಿರ್ಬಂಧಿತ ಸೇವೆ - ಭದ್ರತಾ ಹಾಗು ಸೈನಿಕ ವಿಷಯಗಳಿಗೆ, ರಾಷ್ಟ್ರೀಯ ಸಂಸ್ಥೆಗಳಿಗೆ. 
ಇದಲ್ಲದೆ ಈ ಮಾಹಿತಿಯನ್ನು ಪ್ರಾಕೃತಿಕ ವಿಕೋಪ ನಿರ್ವಹಣಾ ಕಾರ್ಯಗಳಿಗೆ, ನಕ್ಷೆ ತಯಾರಿಕೆಗೆ, ಜಿಪಿಎಸ್ ವ್ಯವಸ್ಥೆಗೆ, ವೈಮಾನಿಕ ಸಂಪರ್ಕ ಹಾಗು ಸಂಚಾರ ನಿರ್ವಹಣಾ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. 

ಈಗಾಗಲೆ ಈ ಸರಣಿಯ ಎರಡು ಉಪಗ್ರಹಗಳು ಐಆರ್‌ಎನ್‌ಎಸ್‌ಎಸ್-೧ಎ, ಐಆರ್‌ಎನ್‌ಎಸ್‌ಎಸ್-೧ಬಿ ಉಡಾವಣೆಗೊಂಡಿದ್ದು ಪೂರ್ವನಿರ್ಧರಿತ ಕಕ್ಷೆಗಳಲ್ಲಿ ಸಂಚರಿಸುತ್ತಿವೆ. ಮೂರನೇಯ ಉಪಗ್ರಹ ಐಆರ್‌ಎನ್‌ಎಸ್‌ಎಸ್-೧ಸಿ ಉಡಾವಣೆಗೆ ತಯಾರಾಗಿದ್ದು, ಪಿಎಸ್‌ಎಲ್‍ವಿ- ಸಿ೨೬ ಉಡ್ಡಯನಾ ವಾಹದಲ್ಲಿ ಭೂ ಮೇಳಯಕ ವರ್ಗಾವಣಾ ಕಕ್ಷೆಗೆ ಸೇರಲಿದೆ. ಸುಮಾರು ೧೪೨೫.೪ ಕೇ.ಜಿ ಇರುವ ಈ ಉಪಗ್ರಹದ ಮೇಲೆ ಎರಡು ಪೇಲೋಡ್‍ಗಳು ಇದ್ದು ಎರಡು ಸೌರ ಫಲಕಗಳು ಸುಮಾರು ೧೬೬೦ ವಾಟ್‍ನಷ್ಟು ವಿದ್ಯುತ್ಶಕ್ತಿಯನ್ನು ವದಗಿಸುತ್ತದೆ.

ಈ ಸರಣಿಯ ಉಪಗ್ರಹಗಳಿಂದ ಭಾರತವು ನ್ಯಾವಿಗೇಷನ್ ವಲಯದಲ್ಲಿ ಸ್ವಾವಲಂಬನೆ ಹಾಗು ಮೇಲ್ಗೈ ಪಡೆಯುತ್ತದೆ. 

ಮಾಹಿತಿ: ಇಸ್ರೋ ಅಧಿಕೃತ ತಾಣ 

ಗುರುವಾರ, ಸೆಪ್ಟೆಂಬರ್ 18, 2014

ಜಮ್ಮು ಪ್ರವಾಸ

ಹಿಂದೇ ದಕ್ಷಿಣ ಭಾರತ ಪ್ರವಾಸದ ಬಗ್ಗೆ ಬರೆದಿದ್ದೇ. ಅದನ್ನೇ ಮುಂದುವರಿಸೋಣಾ ಅಂತ ಅಂದುಕೊಂಡೆ ಆದರೆ ಆ ಪ್ರವಾಸದ ವಿವರಗಳನ್ನು ಬರೆದಿದ್ದ ಪುಸ್ತಕ ಸಿಗಲಿಲ್ಲಾ. ಆ ಕಥನವನ್ನ ಮುಂದಿನ ಬಾರಿ ಬರೆಯುತ್ತೇನೆ, ಸಧ್ಯಕ್ಕೆ ನನ್ನ ಜಮ್ಮು ಪ್ರವಾಸದ ಕಥನವನ್ನು ಹಂಚಿಕೊಳ್ಳುತ್ತೇನೆ.

ನಮ್ಮ ದೇಶದಲ್ಲಿ ನಡೆಯುವ ಹಲವು ಮುಖ್ಯ ವೈಜ್ಞಾನಿಕ ಸಮ್ಮೇಳನಗಳಲ್ಲಿ ಪ್ರಮುಖವದದ್ದು ಇಂಡಿಯನ್ ಸೈನ್ಸ್ ಕಾಂಗ್ರೇಸ್. ಇದು ಪ್ರತೀ ವರ್ಷ ನಡೆಯುತ್ತದೆ, ಪ್ರತೀ ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತದೆ. ಸುಮಾರು ೧೦೦ ಆವೃತ್ತಿಯನ್ನು ಹೊಂದಿರುವ ಪ್ರತಿಷ್ಠಿತ ಕಾರ್ಯಕ್ರಮ ಇದು. ೧೦೧ ನೇ ಸೈನ್ಸ್ ಕಾಂಗ್ರೇಸ್ಸನ್ನು ಜಮ್ಮುನಲ್ಲಿನ ಜಮ್ಮು ವಿಶ್ವವಿದ್ಯಾಲದವರು ಆಯೋಜಿಸಿದ್ದರು. ದೇಶದ ಮೂಲೆ ಮೂಲೆಗಳಿಂದ, ಸಂಶೋಧನಾ ಕೇಂದ್ರಗಳಿಂದ  ಪ್ರಮುಖ ಸಂಸ್ಥೆಗಳಿಂದ, ವಿಶ್ವವಿದ್ಯಾಲಯಗಳಿಂದ ವಿಜ್ಙಾನಿಗಳು,  ಉಪನ್ಯಾಸಕರು, ವಿದ್ಯಾರ್ಥಿಗಳು, ಸಂಶೋಧನಾಕಾರರು, ಆಗಮಿಸಿ ತಮ್ಮ ತಮ್ಮ ಕೆಲಸಗಳನ್ನು, ಸಂಶೋಧನೆಗಳನ್ನು ವಿವರಿಸಿ, ಚರ್ಚಿಸಿ, ಅಭಿಪ್ರಾಯಗಳನ್ನು ಹಂಚಿಕೋಳ್ಳುತ್ತಾರೆ. ಇಂತಹ ಒಂದು ಸಮ್ಮೇಳನಕ್ಕೆ ಹೋಗಿ ಅಲ್ಲಿ ಎಲ್ಲರ ಮುಂದೆ ಒಂದು ಸಂಶೋಧನಾ ಲೇಖನವನ್ನು ಪ್ರಸ್ತುತ ಪಡಿಸಬೇಕು ಅಂತ ನನ್ನ ಒಬ್ಬ ಪ್ರಾಧ್ಯಾಪಕರು ಪ್ರೇರೇಪಿಸಿದರು. ಅಂತು ಇಂತು ಲೇಖನವನ್ನು ಬರೆದು, ಅದನ್ನು ಕಳಿಸಿ, ಅಲ್ಲಿಂದ ಅದನ್ನು ಪ್ರಸ್ತುತಿಸಲು ಒಪ್ಪಿಗೆ ಪಡೆದು ಪ್ರಯಾಣಕ್ಕೆ ಎಲ್ಲ ಸಿದ್ಧತೆಗಳು ನಡೆದವು!!! ಎಲ್ಲವು ಅಂದುಕೊಂಡಂತ್ತೆ ನಡೆದರೆ ಚೆನ್ನಾಗಿರತ್ತೆ, ಆದರೆ ಹಾಗೆ ಆಗುವುದು ಬಹಳ ಅಪರೂಪ. 

ಟ್ರೈನಿನಲ್ಲಿ ಜಮ್ಮುಗೆ ತಲುಪ ಬೇಕಾದ್ರೆ ನಾಲ್ಕು ದಿವಸ ಬೇಕೇ ಬೇಕು. ಇಲ್ಲಿಂದ ದೆಹಲಿಗೆ ಹೋಗಿ ಅಲ್ಲಿಂದ ಮತ್ತೊಂದು ಬಂಡಿಯಲ್ಲಿ ಜಮ್ಮು ತಲುಪಬೇಕು. ನನಗೆ ಒಂದು ಸ್ಪರ್ಧಾತ್ಮಕ ಪರೀಕ್ಷೆ ಇದ್ದ ಕಾರಣ ಟ್ರೈನಿನಲ್ಲಿ ಹೋಗಲಾಗಲಿಲ್ಲ. ವಿಮಾನ ಪ್ರಯಾಣಕ್ಕೆ ಟಿಕೆಟ್ಟು ಬುಕ್ಕ್ ಮಾಡಿಕೊಂಡೆ. ಪರೀಕ್ಷೆ ಮುಗಿಸಿ ಮರು ದಿನ ಬೆಳ್ಳಂಬೆಳಗೆ ವಿಮಾನಯಾನಕ್ಕೆ ಹೋಗಿ ದೆಹಲಿಗೆ ಹೊರಟೆ. ವಿಮಾನದಲ್ಲಿಯೂ ಸಹ ದೆಹಲಿಗೆ ಹೋಗಿ ಅಲ್ಲಿಂದ ಜಮ್ಮು ಮತ್ತೋಂದು ವಿಮಾನ ಹತ್ತಬೇಕು. ಬೆಂಗಳೂರಿನಿಂದ ಪ್ರತ್ಯೇಕ ವಿಮಾನವಿಲ್ಲ. ಒಂದೇ ವಿಮಾನಸಂಸ್ಥೆಯ ವಿಮಾನಗಳೇ ಆದರು ಎರಡು ವಿಮಾನಗಳ ನಡುವೆ ಸುಮಾರು ಎರಡುವರೆ ಘಂಟೆ ಸಮಯವಿತ್ತು. ಒಂದೇ ವಿಮಾನಸಂಸ್ಥೆಯದಾದ್ದರಿಂದ ಲಗ್ಗೇಜಿನ ಜಂಜಾಟ ಇರಲಿಲ್ಲ ಹಾಗು ಬೋರ್ಡಿಂಗ್ ಪಾಸ್‍ನ ತಲೆ ಬಿಸಿ ಇರಲಿಲ್ಲ. ಇಲ್ಲಿ ಬೆಂಗಳೂರಿನಲ್ಲಿ ಚೆಕ್ ಮಾಡಿಸಿ ಲಗ್ಗೇಜ್ ಹಾಕಿದ್ರೆ ಸಾಕು, ಜಮ್ಮುನಲ್ಲಿ ತೆಗೆದುಕೊಳ್ಳಬಹುದಾಗಿತ್ತು. ಹಾಗಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಏನು ಕೆಲಸವಿರಲಿಲ್ಲ. ಹಾಗು ಹೀಗು ೨ ಘಂಟೆ ಕಾಲ ಕಳೆದು ಚೆಕ್-ಇನ್ ಆಗಿ ವಿಮಾನದತ್ತಾ ತೆರಳಿದೆ. ಆಲ್ಲಿ ನನಗೆ ಮೊದಲನೇ ರೋಮಾಂಚಕಾರಿ ವಿಷಯ ತಗುಲಿತು. ನಮ್ಮ ಅವತ್ತಿನ್ನ ಪ್ರಯಾಣವನ್ನು ನಿರ್ವಹಿಸುತ್ತಿದ್ದದ್ದು ಹಾಗು ವಿಮಾನವನ್ನು ನಡೆಸುತ್ತಿದ್ದದ್ದು ಒಬ್ಬ ಮಹಿಳೆ. ನನ್ನ ಮೊದಲನೇಯ ವಿಮಾನಯಾಣವನ್ನು ಎಂದಿಗು ಮರೆಯದ ಹಾಗೆ ಮಾಡಿದಳು ಆಕೆ. ವಿಮಾನವನ್ನು ನಾಜೂಕಾಕಿ ಸಮಯಕಿಂತ ಮುಂಚಿತವಾಗಿ ಜಮ್ಮು ತಲುಪಿಸದ ಆ ಪೈಲಟ್‍ಗೆ ನನ್ನ ನಮನಗಳು.  ಖುಷಿಯಾಗಿ ವಿಮಾನ ಹತ್ತಿದೆ. ಮತ್ತೊಂದು ಅನಿರೀಕ್ಷಿತ ಸಂಗತಿ ನನ್ನನ್ನು ರೋಮಾಂಚಗೊಳಿಸಿತು.  ಅಲ್ಲಿ ಮೊದಲನೇಯ ಸೀಟಿನಲ್ಲಿ (ಅದು ವಿ.ವಿ.ಐ.ಪಿ ಸೀಟು. ಸಾಮಾನ್ಯವಾಗಿ ಮಂತ್ರಿಗಳಿಗೆ, ಗಣ್ಯವ್ಯಕ್ತಿಗಳಿಗೆ ಸೀಮಿತ) ಸಾಮಾನ್ಯನಾಗಿ ಕುಳಿತಿದ್ದ ಒಂದು ಮಹಾನ್ಚೇತನ  ನನ್ನ ಗಮನ ಸೆಳೆದರು. ಅಲ್ಲಿ ಕುಳಿತಿದ್ದಿದ್ದು ಮತ್ಯಾರು ಅಲ್ಲ ಡಾ. ಅಬ್ದುಲ್ ಕಾಲಾಮ್ ಅವರು. ನನ್ನ ಸೀಟಿಗೆ ಚಕ್ಕನೆ ಹೋಗಿ ನನ್ನ ಬ್ಯಾಗನ್ನ ಕ್ಯಾಬಿನ್‍ಗೆ ಹಾಕಿ ಅವರ ಹತ್ತಿರ ಹೋದೆ. ಸರ್ ನಿಮ್ಮ ಆಟೋಗ್ರಾಫ್ ಬೇಕು ಅಂತ ಪೇಪರ್ರು ಕೊಟ್ಟೆ. ’ ನಿನ್ನ ಹೆಸರೇನು, ಏನು ಮಾಡ್ತಿದ್ದೀಯ’, ಅಂತ ಕೇಳಿದ್ರು ಮೇಷ್ಟ್ರು. ನಾನು ನನ್ನ ವಿವರಗಳನ ಹೇಳಿ, ಜಮ್ಮು ಸೈನ್ಸ್ ಕಾಂಗ್ರೇಸ್‍ನಲ್ಲಿ ಭಾಗವಹಿಸುತ್ತಿದ್ದೀನಿ. ಅಲ್ಲಿ ಪೋಸ್ಟರ್ ಕೂಡ ಪ್ರೆಸೆಂಟ್ ಮಾಡ್ತಿದ್ದೀನಿ ಅಂದೆ. ’ ತುಂಬಾ ಸಂತೋಷ. ಯಾವ ವಿಷಯದಮೇಲೆ ಕೆಲಸ ಮಾಡಿದ್ದೀಯ ಆ ಪೇಪರ್‌ನಲ್ಲಿ?’ ಅಂತ ತಕ್ಷಣ ವಿಚಾರಿಸಿದರು. ನಾನು ನನ್ನ ಕೆಲಸದ ಬಗ್ಗೆ ವಿವರಿಸಿದೆ. ’ವಿಷಯ ಚನ್ನಾಗಿದೆ ಹೀಗೆ ಮುಂದೊರಿಸು. ಆಲ್ ದ್ ಬೆಸ್ಟ್’ ಅಂತ ಹಾರೈಸಿದರು. ನಂತರ ಒಂದು ಫೋಟೋಗೂ ಪೋಸ್ ಕೊಟ್ಟರು. ಈ ಎಲ್ಲ ತತಂಗಗಳು ಮುಗಿಯುವ ಹೊತ್ತಿಗೆ ವಿಮಾನ ಹೊರಡಲು ತಯಾರಾಗಿತ್ತು. ನಾನು ನನ್ನ ಸೀಟಿಗೆ ಹೋಗಿ ’ಜೀವನ ಪಾವನವಯ್ತು’ ಅಂತ ಸಂತೋಷದಿಂದ ಕಣ್ಣು ಮುಚ್ಚಿ ಜಮ್ಮುವರೆಗು ಮಲಗಿಬಿಟ್ಟೆ.

ನಾನು ನನ್ನ ಗುರುಗಳು ಹಾಗು ಮಿತ್ರರು ಸೈನ್ಸ್ ಕಾಂಗ್ರೇಸ್‍ಗೆ ಹೋಗಿ ಅಲ್ಲಿ ಹಲವಾರು ಉಪನ್ಯಾಸಗಳನ್ನು ಕೇಳಿದವು. ಡಿ.ಆರ್.ಡಿ.ಓ ದ ಹಲವು ಉಪನ್ಯಾಸಗಳು ನಮ್ಮ ಭಾರತದ ರಕ್ಷಣಾ ಪಡೆಗಳಿಗಾಗಿ ವಿನ್ಯಾಸಗೋಳಿಸಿದ ಹಲವು ಕಾರ್ಯಕ್ರಮಗಳ ಬಗ್ಗೆ, ಅಗ್ನಿ ಅಂತಹ ಕ್ಷಿಪಣಿಗಳ ಬಗ್ಗೆ ಬೆಳಕು ಚಲ್ಲಿದವು. ’ ಭಾರತದ ಕ್ಷಿಪಣಿಗಳ ಮಹಿಳೆ’ ಎಂದೇ ಪ್ರಸಿದ್ಧಿ ಹೊಂದಿರುವ ಡಾ. ಟೆಸ್ಸಿ ಥಾಮಸ್ ರವರನ್ನು ಭೇಟಿ ಮಾಡಿ ತುಂಬ ಖುಷಿಯಾಯಿತು. ಸಮ್ಮೇಳನದಲ್ಲಿ ಕಲಿಯಲು ಬಹಳಷ್ಟು ದೊರಕಿತು. 

ಜಮ್ಮುಯಿಂದ ಕಾಶ್ಮೀರಕ್ಕೆ ಹೋಗೋಣ ಅಂತ ಅಂದುಕೊಂಡೆವು ಆದರೆ ಹಿಮ ಹಿಚ್ಚಾಗಿದೆ ಹೋಗುವುದು ಅಷ್ಟು ಸೂಕ್ತವಲ್ಲವೆಂದು ಬೇಸರಗೋಡಿದ್ದವು. ನಮ್ಮ ಹೋಟೆಲ್‍ನ ಮಾಲಿಕ, ಕಾಶ್ಮೀರ ಬೇಡ ಅದೇ ದಾರಿಯಲ್ಲಿ ’ ಪಟ್ನಿ ಟಾಪ್’ ಅಂತ ಒಂದು ಪಾರ್ಕಿದೆ. ಅಲ್ಲಿಂದ ಹಿಮಪ್ರದೇಶ ಆರಂಭವಾಗುತ್ತದೆ. ಮತ್ತಿನ್ಯಾವಾಗಲೋ ನೀವು ಜಮ್ಮುವಿಗೆ ಬರೊದು ಜಮ್ಮುವಿಗೆ ಬಂದು ಹಿಮ ನೋಡಲಿಲ್ಲ ಅಂದ್ರೆ ನಿಮ್ಮ ಪ್ರವಾಸ ಪೂರ್ಣವಾಗುವುದಿಲ್ಲ, ಹೋಗಿ ಬನ್ನಿ ಎಂದು ಪ್ರೇರೇಪಿಸಿ ಗಾಡಿಯ ವ್ಯವಸ್ಥೆಯೂ ಮಾಡಿಕೋಟ್ಟರು. ಪಟ್ನಿ ಟಾಪ್‍ನಿಂದ ಹಿಮಾಲಯ ಶ್ರೇಣಿಯು ಪ್ರಾರಂಭವಾಗುತ್ತದೆ. ಕಾಶ್ಮೀರಕ್ಕೆ ಹೋಗಲಾಗದಿದ್ದರೆ ಹಾಗೂ ಜಮ್ಮುವಿನಲ್ಲಿದ್ದರೆ ಈ ಸ್ಥಳಕ್ಕೆ ಹೋಗಲೇ ಬೇಕು. ಜಮ್ಮು ಕೂಡ ಸುಂದರ ನಗರ. ಅಲ್ಲಿಂದ ವೈಶ್ಣೋದೇವಿ ಬೆಟ್ಟ ದೂರವಿಲ್ಲ. ಜಮ್ಮುನಿಂದ ಕಟ್ರಾಗೆ ಸಾಕಷ್ಟು ಬಸ್ಸುಗಳಿವೆ. ಕಟ್ರಾ ಬೆಟ್ಟದ ಬುಡದಲ್ಲಿದೆ. ಅಲ್ಲಿಂದ ನಡಿಗೆಯಲ್ಲಿ, ಕುದುರೆಯಮೇಲೆ ಅಥವ ಡೋಲಿಗಳಲ್ಲಿ ದೆವಸ್ಥಾನವನ್ನು ತಲುಪಬಹುದು. ನಮಗೆ ಸಮಯದ ಆಭಾವ ಇದ್ದರಿಂದ ಹೋಗಲಾಗಲಿಲ್ಲ.

ಮತ್ತೆ ನಾವು ಜಮ್ಮುಯಿಂದ ದೆಹಲಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದೆವು. ದಾರಿಯಲ್ಲಿ ಹಲವಾರು ಬುರಡೇ ಪುರಾಣಗಳನ್ನ ಹಂಚಿಕೊಳ್ಳುತ್ತಾ, ಹೊಸಾ ಇಸ್ಪೀಟು ಆಟವನ್ನು ಕಲೆತು ಆಡುತ್ತಾ ಬಂದೆವು.

ಜಮ್ಮು ಪ್ರವಾಸ ಸಾಕಷ್ಟು ಹೊಸ ಅನುಭವಗಳನ್ನ, ಕಲಿಕೆಯನ್ನ, ಸ್ಪೂರ್ಥಿಯನ್ನ ತುಂಬಿದೆ. ಮನಸಿಗೆ ತುಂಬ ಹತ್ತಿರವಾದ ಪ್ರವಾಸವಾಗಿದೆ.


ಶುಕ್ರವಾರ, ಮಾರ್ಚ್ 21, 2014

ದೊಡ್ಡತನ!!!

ಬರೀ ವಯಸ್ಸು ಬೆಳೆದರೆ ಮಾತ್ರ ’ದೊಡ್ಡವರು’  ಎಂದು ಕರೆಯಲು ಅರ್ಹರೇ? ಹು ಎಂದರೆ ಮೂರ್ಖತ್ವವಾಗಬಹುದು. ಇಲ್ಲ ಎಂಬುದೇ ಉತ್ತರವಾದರೆ ಮರುಪ್ರಶ್ನಿಸಬೇಕಾಗುತ್ತದೆ. ಹಾಗಿದ್ದರೆ ’ದೊಡ್ಡತನ’ ಎಂದರೇನು? ಯಾರ್ಯಾರನ್ನ ಕಂಡು ’ಅವರದ್ದು ದೊಡ್ಡ ಗುಣ’ ಎಂದು ಶ್ಲಾಘಿಸಬಹುದು? ಈ ಪ್ರಶ್ನೆಗಳಿಗೆ ಉತ್ತರ ವೈಯಕ್ತಿಕವಾದದ್ದು. ಪ್ರತಿ ಪ್ರಶ್ನೆಗೂ ಅರ್ಥ ವಿವರಣೆ ಕೊಟ್ಟು, ಚರ್ಚಿಸಿ ಅವರವರ ಮೂಗಿನ ನೇರಕ್ಕೆ ವಿವರಣೆ ನೀಡಬಹುದು. ಈ ಅಂಕಣದಲ್ಲಿ ನಾನು ಮೇಲಿನ ಯಾವ ಪ್ರಶ್ನೆಗಳಿಗೂ ಉತ್ತರ ಕೊಡಬಯಸುತಿಲ್ಲ. ಆ ಮಟ್ಟದ ಪರಿಣತಿಯಾಗಲಿ , ವಿಚಾರಗಳಾಗಲಿ, ಅನುಭವವಾಗಲಿ ನನ್ನಲ್ಲಿ ಸಧ್ಯಕ್ಕೆ ಇಲ್ಲ. ಇಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಹಂಚಿಕೊಂಡು ಅದರಿಂದ ನನ್ನ ಅರಿವಿಗೆ ಬಂದ ಕೆಲ ಅಂಶಗಳನ್ನು ತಿಳಿಸುವ ಉದ್ದೇಶವಷ್ಟೆ.

ಕಳೆದ ಭಾನುವಾರ ನಮ್ಮ ಊರಾದ ವಿಜಯಪುರದಲ್ಲಿ ಶ್ರೀ  ಚೆಲುವನಾರಾಯಣ ಸ್ವಾಮಿಯ ಉತ್ಸವ ಹಾಗು ತೇರು ಇತ್ತು. ಪ್ರತಿ ವರ್ಷ ಕಾಮನ ಪೌರ್ಣಮಿಯಂದು ಈ ಕಾರ್ಯಕ್ರಮ ನಡೆಯುವುದು ವಾಡಿಕೆ. ಸಾಮಾನ್ಯ ಈ ಹೊತ್ತಿಗೆ ನನಗೆ ಪರೀಕ್ಷೆ ನಡೆಯುವ ಕಾರಣ ಪ್ರತಿ ವರ್ಷ ಹೊಗಲಾಗುವುದಿಲ್ಲ. ಅವಕಾಶ ಸಿಕ್ಕಿದ್ರೇ ಬಿಡಲ್ಲ. ಈ ಬಾರಿ ಭಾನುವಾರವಾಗಿದ್ದು ಹೋಗಲು ಒಳ್ಳೆಯ ಅವಕಾಶವಾಯ್ತು. ತೇರು ಮಧ್ಯಾನವಾದ್ದರಿಂದ ಬೆಳಿಗ್ಗೆ ಸುಮ್ಮನೆ ಹೋಗಿ ಊರಿನ ಮನೇಲಿ ಕೂರೋದರ ಬದಲು ಬೇರೆ ಎಲ್ಲಿಯಾದರು ಹೋಗಿ ನಂತರ ಊರಿನತ್ತ ಹೋಗುವ ಯೋಜನೆ ನಡೆದಿತ್ತು. 

ಯಾವಾಗಲೊ ಚಿಕ್ಕವನಾಗಿದ್ದಾಗ ನೊಡಿ ಮರೆತಿದ್ದ ಕೈವಾರದತ್ತ ಪಯಣ ಶುರುವಾಯ್ತು ಭಾನುವಾರ ಬೆಳಿಗ್ಗೆ. ಕೈವಾರ ಕ್ಷೇತ್ರವು ಕೋಲಾರ, ಸುತ್ತಮುತ್ತಲಿನ ಹಳ್ಳಿಗಳು ಹಾಗು ಆಂಧ್ರದಲ್ಲಿ ಪ್ರಸಿದ್ಧವಾಗಿದೆ. ಅಲ್ಲಿನ ತಾತಯ್ಯನವರ ತತ್ವಪದಗಳು ನಮ್ಮ ಜಾನಪದದಲ್ಲಿ  ಆಳವಾಗಿ ಬೇರುಬಿಟ್ಟಿದ್ದರು ಹೆಚ್ಚು ಪ್ರಚಾರದಲಿಲ್ಲವೆಂದರೆ ತಪ್ಪಾಗಲಾರದು.  ಅವರು ೧೮ ನೇ ಶತಮಾನದಲ್ಲಿಯೇ ತಪೋಶಕ್ತಿಯಿಂದ ಕಾಲಜ್ಞಾನವನ್ನು ಬರೆದಿದ್ದಾರೆ. ಈ ಎಲ್ಲವನ್ನು ಕೆಳಿದ್ದ ನನಗೆ ಅದೇನೋ ಉಲ್ಲಾಸವಿತ್ತು ಈ ಕ್ಷೇತ್ರವನ್ನು ಸಂದರ್ಶಿಸಲು.

ಬೆಳಗ್ಗೆ ಸುಮಾರು  ೧೦ರ ಹೊತ್ತಿಗೆ ನಾವು ಕೈವಾರ ತಲುಪಿ ದೇವಸ್ಥಾನದ ಒಳಗೆ ಹೊಕ್ಕವು. ಪ್ರತಿ ಹುಣ್ಣಿಮೆಯಂದು ತಾತಯ್ಯನವರಿಗೆ ಹಾಗು ಅವರ ಆರಾಧ್ಯ ದೈವವಾದ ಅಮರನಾರಾಯಣನಿಗೆ ತೇರೊತ್ಸವ ಮಾಡುವುದು ಅಲ್ಲಿನ ಪದ್ಧತಿ. ಅದರ ಸಲುವಾಗಿ ಕೈಂಕರ್ಯಗಳು ಜರಗುತ್ತಿದ್ದವು. ಅಲ್ಲಿ ದರ್ಶನ ಮುಗಿಸಿ ಅದೇನು ಹುಮ್ಮಸ್ಸಿನಿಂದ ಹೊರಬಂದೆವು. ಬಹುಶಃ ಸ್ಥಳ ಮಹಿಮೆ ಇರಬೇಕು!!! ಅಪ್ಪನಿಗೆ ಅವರ ಗೆಳೆಯರೊಬ್ಬರು ಹತ್ತಿರದಲ್ಲಿ ಕೈಲಾಸ ಗಿರಿ ಎಂಬ ಕ್ಷೇತ್ರವಿದೆ ಮರೆಯದೆ ಸಂದರ್ಶಿಸಿ ಎಂದಿದ್ದರಂತೆ. ಅಲ್ಲಿನ ಜನರನ್ನು ದಾರಿ ಕೇಳಿ ಸುಮಾರು ೬ ಕಿ.ಮಿ. ಪ್ರಯಾಣಿಸಿ, ಬೆಟ್ಟವನ್ನು ಹತ್ತಿ ಕೈಲಾಸಗಿರಿ ಕ್ಷೇತ್ರವನ್ನು ತಲುಪಿದ್ದೆವು. ಒಂದು ಬೆಟ್ಟವನ್ನು ಕೊರೆದು ಅದರೊಳಗೆ ದೇವಸ್ಥಾನಗಳನ್ನ ನಿರ್ಮಿಸಿದ್ದಾರೆ. ತುಂಬ ಸುಂದರವಾಗಿದೆ. ಗಾಡಿ ನಿಲ್ಲಿಸಿವ ಸ್ಥಳದಿಂದ ಸುಮಾರು ೨೦೦ ಮೀಟರ‍್ ನಷ್ಟು ಬೆಟ್ಟಹತ್ತಬೇಕು. ಮೇಲೆ ಸೂರ್ಯನು ನಿಗಿನಿಗಿಯುತ್ತಿದ್ದ, ಬೆಟ್ಟ ಹತ್ತಿ ತುಂಬ ಆಯಾಸವಾಗಿತ್ತು. ಅಲ್ಲೆ ಒಬ್ಬ ಹುಡುಗ ಬಹುಶಃ ಮಾಧ್ಯಮಿಕ ಶಾಲಾ ವಿದ್ಯಾರ್ಥಿ ಇರಬೇಕು, ಎಳೇ ಸೌತೆಕಾಯಿಗಳನ್ನ ಮಾರುತ್ತಿದ್ದ. ಆಸೆಯಾಗಿ ನಾನು ಅಪ್ಪ ಒಂದು ತೆಗೆದುಕೊಂಡು ತಿನ್ನಲಾರಂಭಿಸಿದೆವು. ಆದರೆ ಅದು ತುಂಬ ಕಹಿಯಾಗಿತ್ತು ಆ ಹುಡುಗನಿಗೆ ’ಮರಿ ತುಂಬ ಕಹಿ ಇದ್ಯಲ್ಲೋ’ ಎಂದು ಕಷ್ಟಪಟ್ಟು ಮತ್ತೊಂದು ತುಂಡು ತೆಗೆದುಕೊಂಡೆವು. ಅದನ್ನು ಕೇಳಿದ ಹುಡುಗ ಕ್ಷಣಮಾತ್ರದಲ್ಲಿ ’ಹೋಗ್ಲಿ ಬಿಸಾಡಿ ಅಣ್ಣಾ ಬೇರೆಯ ಕಾಯಿ ಕೊಡುತ್ತೆನೆ’ ಎಂದು ಮತ್ತೊಂದು ಕಾಯಿ ಕೈಗಿತ್ತನು. ’ಎಷ್ಟ್ ಕೊಡ್ಬೇಕು’ ಎಂಬ ಪ್ರಶ್ನೆಗೆ ’ಹತ್ ರೂಪಾಯಿ ಸಾಕು’ ಎಂದು ಬರೀ ಒಂದರ ಬೆಲೆ ಹೇಳಿದ. ಕೇಳಿದ ಮರು ಕ್ಷಣವೆ ನಮಗೆ ಸಂತಸವಾಯ್ತು. 

ಕಹಿ ಕಾಯಿ ಬಂದದ್ದು ಅವನ ತಪ್ಪೆನು ಅಲ್ಲ ನಮ್ಮ ಅದೃಷ್ಟ ಆದರೆ ಆ ಹುಡುಗ ತಾನು ಜವಾಬ್ದಾರಿ ಹೊತ್ತು ಮತ್ತೊಂದು ಕಾಯಿ ಬಿಟ್ಟಿಯಾಗಿ ಕೊಡೋ ಅವಶ್ಯಕತೆ ಇರಲಿಲ್ಲ. ಅದೊಂದು ಸಣ್ಣ ವಿಷಯದಲ್ಲಿ ತನ್ನ 'ದೊಡ್ಡತನವನ್ನು' ತೋರಿಸಿದ್ದ ಆ ಹುಡುಗ. ಸಣ್ಣ ಸಣ್ಣ ವಿಚಾರಗಳಲ್ಲೆ ನಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಬಹುದು ಎಂಬ ನೀತಿಯನ್ನು ಆ ಹುಡುಗ ನಮಗೆ ನೀಡಿದ್ದ. ಆ ವಯಸ್ಸಿನಲ್ಲಿ ಇಷ್ಟರಮಟ್ಟಿಗೆ ಆತ ವಿಚಾರಿಸಬಲ್ಲ ಎಂದರೆ ಆತನ ಗುಣ ನಿಜವಾಗಿಯು ’ದೊಡ್ಡದು’ ಎಂಬುದು ನನ್ನ ಭಾವನೆ. ಆತ ಹಾಗೆ ನಡೆದುಕೊಳ್ಳಲು ಕಾರಣಗಳು ಬೇರೇನೆ ಇದ್ದಿರಬಹುದು, ಆತನ ದೃಷ್ಟಿಕೋಣೆ ಬೇರೆಯಾಗಿದ್ದಿರಬಹುದು. ಇದು ಸಂಪೂರ್ಣವಾಗಿ ನನ್ನ ಅನಿಸಿಕೆ - ನಾನು ಕಲೆತ ಗುಣಪಾಠ!!!