ಬುಧವಾರ, ಸೆಪ್ಟೆಂಬರ್ 18, 2013

ನಮ್ಮ ಬದುಕು

ನಾನು ಹುಟ್ಟಿದಾಗಿಂದ ಬೆಂಗಳೂರು ಮಹಾನಗರದಲ್ಲೇ ಇದ್ದೀನಿ. ಈ ನಗರ ಬಿಟ್ಟು ಹೋಗಲು ಕಾಲ ಇನ್ನು ಕೂಡಿ ಬಂದಿಲ್ಲ. ಬಹಳ ಮಂದಿ ಇಲ್ಲಿಗೆ ನಾನಾ ಕರಣಗಳಿಂದ ಬರುತ್ತಾರೆ. ಬಂದವರು ಈ ಮಾಯಾನಗರಿಯ ಮೋಡಿಗೆ ಸಿಲುಕಿ ಇಲ್ಲಿಯೇ ಉಳಿಯುತ್ತಾರೆ. ಇವೆಲ್ಲ ನಮಗೆ ದೈನಂದಿನ ವಿಚಾರವೇ ಸರಿ. ಆದರೆ ಜನ ಈ ಮಾಯಾನಗರಿಯನ್ನ ಸಾಂಸ್ಕೃತಿಕ ಹಾಗು  ಐತಿಹಾಸಿಕ ನಗರಿಯಾಗಿ ಗುರುತುಹಿಡಿಯುವುದಿಲ್ಲ. ಐಟಿ/ಬೀಟಿ ಗಳ ನಗರವಾಗಿಯೂ ದೊಡ್ಡ, ಭಾರಿಯಾದ ಮಾಲ್‍ಗಳ ನಗರವಾಗಿಯೂ ಹಾಗೂ ತಂಗಲು ಅತಿ ಸೂಕ್ತವಾದ ವಾತಾವರಣವಿರುವ ನಗರವಾಗಿಯೂ ಪ್ರಸಿದ್ಧಿ ಹೊಂದಿದೆ. ಇಲ್ಲಿಯೇ ಹುಟ್ಟಿ ಬೆಳೆದ ಮಂದಿ ಸಹ ಅದೆಲ್ಲೋ ಆಕಾಶದಿಂದ ಉದುರಿರುವಹಾಗೆ ವರ್ತಿಸುವ ಪರಿಸ್ಥಿತಿ ಬಂದಿದೆ. 

ಇರಲಿ ಇದೆಲ್ಲ ನನ್ನ ಈ ಅಂಕಣದ ವಿಶಯವಲ್ಲ. ಹಿಂದೆ ತಿಳಿಸಿದ ಹಾಗೆ ನಾನು ಸರಿ ಸುಮಾರು ೨೨ ವರ್ಷಗಳಿಂದ ಈ ಸುಂದರ ನಗರಿಯಲ್ಲಿ ವಾಸಾವಗಿದ್ದೀನಿ. ಹಾಗಾಗಿ ಇಲ್ಲಿನ ಹಲವು ಜಾಗಗಳ ಪರಿಚಯವಿದೆ. ಪ್ರಮುಖ ರಸ್ತೆಗಳು, ಪ್ರಸಿದ್ಧ ಸ್ಥಳಗಳು, ಉನ್ನತ, ಪ್ರಖ್ಯಾತ ಹೋಟೆಲ್‍ಗಳು ಇತ್ಯಾದಿ ಇತ್ಯಾದಿ. ಕೆಲ ಜಾಗಗಳ ಸುತ್ತಲು ದಿನಂಪ್ರತಿ ಓಡಾಡುತ್ತಿರುತ್ತೇನೆ. ಆದರೂ ಆ ಸ್ಥಳಗಳಿಗೆ ಪ್ರತ್ಯೇಕವಾಗಿ ಭೇಟಿ ಕೊಡುವುದಿಲ್ಲ. ’ ಹೇ! ಅದು ನಾ ಹುಟ್ಟಿದಾಗಿಂದ ಇಲ್ಲೆ ಇದೆ. ಮುಂದೇನು ಇಲ್ಲೆ ಇರತ್ತೆ. ಮತ್ತೊಮ್ಮೆ ಹೋದರಾಯ್ತು’ ಎಂಬ ಮನೋಭಾವವೋ ಇಲ್ಲ ’ದಿನಾ ಸಯುವರಿಗೆ ಅಳೋದ್ಯಾರು! ದಿನಾ ನೋಡೋ ಜಾಗ/ ವಸ್ತುವಿನಲ್ಲಿನ ವಿಶೇಷವಾದರು ಏನು’ ಎನ್ನುವ ಉಡಾಫೆಯೋ ಗೊತಿಲ್ಲ. ಈ ಪ್ರಸಿದ್ಧ ಜಾಗಗಳಿಗೆ ಪ್ರತ್ಯೇಕವಾಗಿ ಹೋಗುವುದಿಲ್ಲ ಅಷ್ಟೆ!!!

ಹೀಗೆ ನನ್ನಿಂದ ಅಲಕ್ಷಿತವಾದ ಸ್ಥಳಗಳಲ್ಲಿ ಒಂದು - ದೊಡ್ಡ ಗಣಪತಿಯ ದೇವಸ್ಥಾನ ಹಾಗು ಅದರ ಸುತ್ತಲಿನ ಗುಡಿಗಳು.  ೨೨ ವರ್ಷಗಳಲ್ಲಿ ಈ ದೇವಸ್ಥಾನದ ಒಳಗೆ ನಾನು ಬೆರಳೆಣಿಕೆಯಷ್ಟು ಬಾರಿ ಹೋಗಿರಬಹುದು. ಮೊನ್ನೆಯದಿವಸ ಇದ್ದಿಕಿದ್ದಹಾಗೆ ಯಾವುದೋ ಬೋಧಿ ವೃಕ್ಷದ ತುಂಡು ಬಿದ್ದು ಜ್ಞಾನೋದಯವಾಗಿ ದೊಡ್ಡ ಗಣಪತಿ ಗುಡಿಯತ್ತ ಕಾಲು ಬೆಳೆಸಿದೆ. ಅವತ್ತು ಅಲ್ಲಿ ಗಣೇಶೋತ್ಸವದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸ್ವಲ್ಪ ಕಾಲ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಳೆದು ನಂತರ ಬಸವನ ಗುಡಿಯತ್ತ ನಡೆದೆ. ಆ ಚಿಕ್ಕ ದಿಬ್ಬ ಹತ್ತುತ್ತಾ ನನ್ನ ಬಾಲ್ಯದ ನೆನಪಾಯ್ತು. ಅಪ್ಪ ಅಮ್ಮನ ಜೊತೆ ಕೈ ಕೈ ಹಿಡೆದುಕೊಂಡು ಒಂದೊಂದೇ ಮೆಟ್ಟಿಲುಗಳನ್ನ ಕುಪ್ಪಳಿಸುತ್ತಾ ಹತ್ತುತ್ತಿದ್ದದ್ದು. ಅಲ್ಲಿ ಸಿಗುತಿದ್ದ ಆಟಿಕೆಗಳನ್ನ ಕೊಡಿಸುವಂತೆ ಅಪ್ಪನನ್ನ ಪೀಡಿಸುತ್ತಿದ್ದದ್ದು. ಇವೆಲ್ಲದರ ನೆನಪಾಯ್ತು!!! 

ಗುಡಿಗೆ ಹೋಗಿ ಬಸವನ ದರ್ಶನ ಮಾಡಿ ವಾಪಸಾಗುತಿದ್ದಾಗ ವಿಚಿತ್ರವಾದ ಆಲೋಚನೆ ಒಂದು ತಲಿಗೆ ಬಂತು. ಇದು ಎಂತಹ ವೈವಿದ್ಯಮಯವಾದ ದೇಶ!!! ಇಲ್ಲಿ ನಾವು ಒಂದು ಪ್ರಾಣಿಗೆ ದೇವಾಲಯ ಕಟ್ಟಿ ಅದಕ್ಕೆ ದೈವೀ ಶಕ್ತಿ ಇದೇ ಎಂದು ಭಾವಿಸಿ ಪೂಜಿಸಿ ಆರಾಧಿಸುತ್ತೇವೆ. ಇದರ ಅರ್ಥ ನಮಗೆ ಮೂಢನಂಬಿಕೆ ಇದೆ ಅಂತಲ??? ಇಲ್ಲ. ಇಂತಹ ಒಂದು ಆಚರಣೆಯ ಹಿಂದೆ ಯಾವುದಾದರು ಬಲವಾದ ಕಾರಣವಿರಲೇಬೇಕು. ನನ್ನ ಅಭಿಪ್ರಾಯದಲ್ಲಿ ಅಂದಿನ ಜನ ಪ್ರಕೃತಿಯ ಜೊತೆ ಅವಿನಾಭಾವ ಸಂಬಧ ಹೊಂದಿದ್ದು ಅದರಿಂದ ಪಡೆದ ಉಪಯೋಗಗಳಿಗೆ ಕೃತಜ್ಞತೆ ತೋರಿಸಲು ಹಾಗು ತಮಗೆ ಅದರ ಮೇಲಿನ ಪ್ರೀತಿ ವ್ಯಕ್ತಪಡಿಸಲು ಈ ತರಹದ ಆಚರಣೆಗಳನ್ನು ಪ್ರಾರಂಭಿಸಿರಬೇಕು. ಅದು ಬಿಟ್ಟು ಬೇರೆ ಯಾವ ಸೂಕ್ತ ಕರಣಗಳು ನನ್ನ ತಲೆಗೆ ಹೊಳೆಯಲೇ ಇಲ್ಲ. 

ಆದರೆ ನಾವು ಈಗೆನವರು ಇದರ ಅರಿವಿಲ್ಲದೆ ಸುಮ್ಮನೆ ಏನೋ ಮಾಡಬೇಕು ಅಂತ ಮಾಡುತ್ತಾ, ನಮ್ಮ ಪೂರ್ವಿಕರನ್ನು ದೂಷಿಸುತ್ತಾ ಅಲಗಳಿಯುತ್ತಾ ಬದುಕು ಸಾಗಿಸುತ್ತೀವಿ. ಅದಲ್ಲದೆ ನಾವುಗಳು  ಪಾರ್ಟಿ/ ಮಾಲ್ ’ಕಲ್‍ಚರ್’ಗೆ ಮೊರೆ ಹೋಗಿ ಇಂತಹ ಮಹತ್ವದ ಅರ್ಥವತ್ತಾದ ಆಚರಣೆಗಳನ್ನ ಬಿಟ್ಟು ಅತಿ ಸೂಕ್ಷ್ಮ ವಿಷಯಗಳನ್ನ ಮರೆತು ಯಾಂತ್ರಿಕ ಬದುಕೇ ಬದುಕು ಎಂಬ ಭ್ರಮೆಯಲ್ಲಿ ಕಾಲ ಕಳೆಯುತ್ತಿದ್ದೀವಿ. ಇದು ನಮ್ಮ ಬದುಕು ಅಂದುಕೊಂಡು ನಕ್ಕು ಮನೆಗೆ ಹೊರೆಟೆ!!!