ಗುರುವಾರ, ಮೇ 2, 2019

ಸ್ಟೀವ್: ಆಗಸದಲ್ಲಿನ ಮತ್ತೊಂದು ವಿಸ್ಮಯ

ಆಕಾಶ ವೀಕ್ಷಣೆ ಯಾವಾಗಲೂ ವಿಸ್ಮಯಕಾರಿ ಹಾಗೂ ಕುತೂಹಲಕಾರಿ. ಕಗ್ಗತ್ತಲಿನ ಸಂಜೆಯಂದು ಆಗಸದಲ್ಲಿ ನಮ್ಮ ಕಣ್ಣಿಗೆ ಕಾಣಬಹುದಾದ ಹಲವು ವಿದ್ಯಮಾನಗಳು ನಮ್ಮ ಗಮನ ಸೆಳೆಯುವುದಲ್ಲದೆ ಅದರ ವೈಜ್ಞಾನಿಕ ಹಿನ್ನಲೆಯ ತಿಳಿಯುವ ಕುತೂಹಲ ಮತ್ತು ಆಸಕ್ತಿ ಹುಟ್ಟಿಸುತ್ತವೆ. ಅದರಲ್ಲಿ ಮಾನವರನ್ನು ಅಚ್ಚರಿಯ ಒಂದು ವಿದ್ಯಮಾನ ಅರೋರಾ ಅಥವಾ ಧ್ರುವಪ್ರಭೆಗಳು.

ಉತ್ತರ ಧ್ರುವಪ್ರಭೆಯ ಚಿತ್ರ © APOD  

ನಮ್ಮ ಸೂರ್ಯನಿಂದ ಅತಿ ಹೆಚ್ಚಿನ ಶಕ್ತಿಯುಳ್ಳ ವಿದ್ಯದಾವಿಷ್ಟ ಕಣಗಳು ತೀಕ್ಷ್ಣ ವೇಗದಲ್ಲಿ ಹೊರಬರುತ್ತವೆ. ಸಾವಿರಾರು ಕಿಲೋಮೀಟರ್ಗಳು ಸಾಗಿ ಬಂದು ನಮ್ಮ ಭೂಮಿಯನ್ನು ಅಪ್ಪಳಿಸುತ್ತವೆ. ಭೂಮಿಯ ಸುತ್ತಲು ಇರುವ ಕಾಂತೀಯ ಕ್ಷೇತ್ರವು ನಮ್ಮನ್ನು ಇಂತಹ ಕಣಗಳಿಂದ ರಕ್ಷಿಸುತ್ತದೆ. ಆದರೆ ಭೂಕಾಂತ ಕ್ಷೇತ್ರವು ಭೂಮಿಯನ್ನು ವೃತ್ತಾಕಾರವಾಗಿ ಆವರಿಸಿಲ್ಲ. ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಕಾಂತ ಕ್ಷೇತ್ರದ ತೀವ್ರತೆ ಅತಿ ಕಡಿಮೆ ಇರುತ್ತದೆ. ಹಾಗಾಗಿ ಧ್ರುವಗಳಲ್ಲಿ ಕಾಂತ ಕ್ಷೇತ್ರದಲ್ಲಿ ಸಣ್ಣ ಕಿಂಡಿಗಳು ಇರುವಂತೆ ಭಾಸವಾಗುತ್ತದೆ. ನಮ್ಮ ಭೂಮಿಗೆ ಅಪ್ಪಳಿಸುವ ಈ ವಿದ್ಯದಾವಿಷ್ಟ ಕಣಗಳು ಬಹುತೇಕವಾಗಿ ವಿಕರ್ಷಿಸಲ್ಪಟ್ಟರೂ ಧ್ರುವಗಳಲ್ಲಿ ಇರುವ ಕಿಂಡಿಗಳ ಮೂಲಕ ಭೂಮಿಯ ವಾಯುಮಂಡಲವನ್ನು ಪ್ರವೇಶಿಸುತ್ತವೆ. ವಾಯುಮಂಡಲ ಪ್ರವೇಶಿಸಿದ ಕಣಗಳು ಅಲ್ಲಿನ ಪರಮಾಣುಗಳ ಜೊತೆ ಡಿಕ್ಕಿಹೊಡೆದು ಪ್ರಭೆಯ ರೂಪದಲ್ಲಿ ಅಕಸದ ಉದ್ದಕ್ಕೂ ಕಾಣಿಸುತ್ತದೆ. ಘರ್ಶಿಸುವ ಪರಮಾಣುಗಳ ಗುಣಕ್ಕೆ ಅನುಗುಣವಾಗಿ ಪ್ರಭೆಯ ಬಣ್ಣವು ಬದಲಾಗುತ್ತವೆ. ಉನ್ನತ ಹಾಗೂ ಕೆಳ ಅಕ್ಷಾಂಶ ಪ್ರದೇಶಗಳಿಂದ ಈ ಧ್ರುವಪ್ರಭೆಗಳನ್ನು ವೀಕ್ಷಿಸಬಹುದು. ನಕ್ಷತ್ರಗಳಿಂದ ತುಂಬಿದ ಕಪ್ಪು ಹಿನ್ನಲೆಯಲ್ಲಿ ಬಣ್ಣ ಬಣ್ಣವಾಗಿ ಪ್ರಕಟವಾಗುವ ಬೆಳಕಿನ ನಾಲೆಗಳನ್ನು ನೋಡುವುದೇ ಒಂದು ಅದ್ಭುತ ದೃಶ್ಯ. ಇದನ್ನು ಕಂತುಮ್ಬಿಸಿಕೊಳ್ಳಲು ಈ ಪ್ರದೇಶಗಳಿಗೆ ಜನರು ಪ್ರಪಂಚದ ಮೂಲೆ ಮೂಲೆಗಳಿಂದ ಬರುತ್ತಾರೆ.


ಭೂಮಿಯ ಕಾಂತೀಯ ಕ್ಷೇತ್ರ ©aurora-service 

ಹೀಗೆ ಅರೋರಾಗಳ ಬೆನ್ನಟ್ಟಿ ಅವುಗಳನ್ನು ನೋಡಿ, ಅವುಗಳ ಚಿತ್ರಗಳನ್ನು ಸೆರೆಹಿಡಿದು ಸಂಭ್ರಮಿಸಿವ ಹಲವು ಗುಂಪುಗಳಿವೆ. ಅವುಗಳಲ್ಲಿ ಆಲ್ಬರ್ಟಾ ಅರೋರಾ ಚೇಸರ್ಸ್ ಎಂಬ ಗುಂಪಿನ ಸದಸ್ಯರು ಆಲ್ಬರ್ಟಾ, ಕೆನಡಾದಲ್ಲಿನ  ಒಂದು ಪ್ರವಾಸದ ವೇಳೆ ವಿಶಿಷ್ಟವಾದ ಬೆಳಕಿನ ನಾಲೆಯನ್ನು ಕಂಡು ಚಿತ್ರ ಸೆರೆಹಿಡಿದರು. ಅದು ಬೇರೇ ಧ್ರುವಪ್ರಭೆಗಳಿಗಿಂತ ವಿಬ್ಭಿನ್ನವಾಗಿ ಕಾಣಿಸಿತ್ತು. ಸಾಮಾನ್ಯವಾಗಿ ಆಗುವ ಪ್ರಭೆಗೆ ಎಲೆಕ್ಟ್ರಾನ್ ಕಾರಣವಾದರೆ, ಇವರು ಕಂಡ ವಿದ್ಯಮಾನಕ್ಕೆ ಪ್ರೋಟಾನ್ ಕಾರಣವಿರಬಹುದು ಎಂದು ಊಹಿಸಿ ಇದು ಪ್ರೋಟಾನ್ ಪ್ರಭೆ ಅಥವಾ ಅರೋರಾ ಇರಬಹುದು ಎಂದಿದ್ದರು. ಇದಕ್ಕೆ ಗುಂಪಿನ ಛಾಯಾಚಿತ್ರಗಾರ ಒಬ್ಬರು ‘ಸ್ಟೀವ್’ ಎಂದು ಹೆಸರಿಟ್ಟರು. ಚಿತ್ರಗಳನ್ನು ಗಮನಿಸಿದ ಭೌತಶಾಸ್ತ್ರಜ್ಞರು ಪ್ರೋಟಾನ್ನಿಂದ ಉತ್ಪನ್ನವಾಗುವ ಪ್ರಭೆಯು ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ ಎಂಬ ಕಾರಣಕ್ಕೆ ಈ ವಿದ್ಯಮಾನ ಪ್ರೋಟಾನ್ ಕಣಗಳಿಂದ ಆಗುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಸ್ಟೀವ್ನ ಒಂದು ಚಿತ್ರ ©Elfie Hall 

ಇತ್ತೀಚೆಗೆ ವಿಜ್ಞಾನಿಗಳು ಯುರೋಪಿನ ಸ್ಪೇಸ್ ಏಜನ್ಸಿಯ ‘ಸ್ವರ್ಮ್’ ಎಂಬ ಉಪಗ್ರಹವನ್ನು ಬಳಸಿ ಅದರಿಂದ ಸ್ಟೀವ್ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದ್ದರೆ. ಈ ಅಧ್ಯಯನದಿಂದ ತಿಳಿದು ಬಂದ ಮಾಹಿತಿ ಹೀಗಿದೆ: ಸ್ಟೀವ್ ನಮ್ಮ ವಾಯುಮಂಡಲದಲ್ಲಿ ನಡೆಯುವ ಒಂದು ದ್ಯುತಿ ವಿದ್ಯಮಾನ. ಭೂಮಿಯ ಅಯಾನುಗೋಳ ಪ್ರವೇಶಿಸುವ ವಿದ್ಯದಾವಿಷ್ಟ ಕಣಗಳ ಘರ್ಷಣೆಯಿಂದ ಉಷ್ಣತೆ ಹೆಚ್ಚಾಗಿ ಕಣಗಳು ಬೆಳಕಿನ ವಿಕಿರಣಗಳನ್ನು ಹೊರಹಾಕುತ್ತವೆ. ನಮ್ಮ ಮನೆಗಳಲ್ಲಿ ಟಂಗ್ಸ್ಟನ್ ಬಲ್ಬುಗಳು ಹೀಗೆ ಕೆಲಸಮಾಡುತ್ತವೆ. ಸ್ಟೀವ್ ಗುಲಾಬಿ ಅಥವಾ ನೇರಳೆ ಬಣ್ಣದ ಸಣ್ಣ ಬೆಳಕಿನ ಪಟ್ಟಿಯಾಗಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವಂತೆ ಕಾಣುತ್ತದೆ. ಕೆಲವೊಮ್ಮೆ ಇದರ ಮಧ್ಯದಲ್ಲಿ ಹಸಿರು ಬಣ್ಣದ ರೇಖೆಗಳು ಕಾಣಿಸುತ್ತವೆ. ಇದು ಧ್ರುವಪ್ರಭೆಗಳ ತರಹ ಬರೀ ಧ್ರುವಗಳಲ್ಲಿ ಅಲ್ಲದೆ ಭೂಮಿಯ ಬೇರೆ ಪ್ರದೇಶಗಲ್ಲಿ ಕಾಣಿಸುತ್ತವೆ. ಅಷ್ಟು ವಿರಳವಲ್ಲದಿದ್ದರೂ ಹಿಂದೆ ಈ ವಿದ್ಯಮಾನವನ್ನು ಹೆಚ್ಚು ಗಮನಿಸಿ ಅಧ್ಯಯನ ಮಾಡದಿದ್ದ ಕಾರಣ ಇದರ ಬಗ್ಗೆ ಮಾಹಿತಿ ಇರಲಿಲ್ಲ.

ಮುಂದಿನ ದಿನಗಳಲ್ಲಿ ನೀವು ರಾತ್ರಿ ಆಗಸವನ್ನು ವಿಸ್ಮಯದಿಂದ ನೋಡುವಾಗ ನಿಮಗೂ ಸ್ಟೀವ್ನ ದರ್ಶನವಾಗಬಹುದು.

ಹೆಚ್ಚಿನ ಮಾಹಿತಿಗೆ ಈ ಪೇಪರ್ ಓದಬಹುದು:  DOI: 10.1029/2019GL082460