ಶನಿವಾರ, ಅಕ್ಟೋಬರ್ 19, 2013

ಇಷ್ಟೇನಾ?

ಈ ಪ್ರಶ್ನೆಯನ್ನು ನಾವು ಹಲವು ಬಾರಿ, ಹಲವಾರು ಸಂದರ್ಭಗಳಲ್ಲಿ ಬಳಸಿದ್ದೀವಿ. ಭಾಷೆಯ ಸೊಗಡೆ ಅದು, ಒಂದೇ ಪದ ಅಥವ ಗುಚ್ಛವನ್ನ ಹಲವು ಸಂದರ್ಭಗಳಲ್ಲಿ ಬಳಸಬಹುದು. ಅದರ ಅರ್ಥ ಸಾಂದರ್ಭಿಕವಾಗಿ ಸ್ವಲ್ಪ ವ್ಯತ್ಯಾಸವಾಗಬಹುದು ಅಷ್ಟೆ. ಅರ್ಥವೆಂದರೆ ’ಒಳಾರ್ಥ’ವೆಂದು ಅರ್ಥೈಸಿಕೊಳ್ಳಬೇಕು. ಮತ್ತೊಂದು ಗಮನಾರ್ಹ ವಿಷಯವೆಂದರೆ, ನಮ್ಮ ಶಾರೀರಿಕ ಹಾಗು ಶಾರೀರದಲ್ಲಿನ ಬದಲಾವಣೆಗಳು. ನಾನು ಇಲ್ಲಿ ಮನೋವಿಜ್ಞಾನ ಮಾತನಾಡ್ತಿಲ್ಲ. ಈ ಸೂಕ್ಷ್ಮತೆ , ಅಂದರೆ ಪದ/ವಾಕ್ಯದ ಸಾಂದರ್ಭಿಕ ಬಳಿಕೆ ಹಾಗು ಅದಕ್ಕನುಗುಣವಾಗಿ ಬದಲಾಗುವ ನಮ್ಮ ಶೈಲಿ, ನಾವು ಹೇಗೆ ಮರೆತುಹೊಗುತ್ತೇವೆ ಎಂಬ  ಚಿಕ್ಕ ಸೂಚನೆ. 

"ಇಷ್ಟೇನಾ?" ಎಂಬ ಪ್ರಶ್ನೆಯು ತುಂಬಾ ಸೂಕ್ಷ್ಮವಾದದ್ದು. ಇದು ಬಹಳ ಬಳಕೆಯಾಗುತ್ತದೆ ನಿಜ, ಆದರೆ ಅದರಲ್ಲೇನಿದೆ ಸೂಕ್ಷ್ಮತೆ ಎಂಬ ಸಂದೇಹ ನಿಮಗಿರಬಹುದು. ಅದು ಸಹಜವೇ ಸರಿ. ನನ್ನ ಅಂತರಾಳದಲ್ಲಿ ಅದರ ಸೂಕ್ಷ್ಮತೆಯನ್ನು ನಾನು ಹೇಗೆ ಅರ್ಥೈಸಿಕೊಂಡಿದ್ದೇನೆ ಎಂದು ನಿಮಗೆ ಮುಂದೇ ತಿಳಿಯುತ್ತದೆ. ಈ ಪದವಲ್ಲದೆ ನಾವು ಸಾಮಾನ್ಯವಾಗಿ " ಅಷ್ಟೇನಾ?" ಎಂಬ ಪದವನ್ನೂ ಸಹ ಬಳೆಸುತ್ತೇವೆ. ಈ ಎರಡೂ ಪದಗಳು ಸಾಂದರ್ಭಿಕವಾಗಿ ಒಂದೇ ಅರ್ಥ ಕೊಡಬಹುದು. 

ಒಬ್ಬ ಗೃಹಿಣಿ ತರಕಾರಿ ಮಳಿಗೆಗೆ ಹೋಗಿ ಅಲಿದ್ದ ನಾಲ್ಕೇ ನಾಲ್ಕು ತರಕಾರಿಗಳನ್ನು ಕಂಡು ಮಳಿಗೆಯ ಮಾಲೀಕನ ಬಳಿ ಕೇಳುವ ಪ್ರಶ್ನೆಯೂ ಇದೆ, ಒಬ್ಬ ಸಾಹುಕಾರ ಆಭರಣದ ಅಂಗಡಿಯಲ್ಲಿ ಕುಳಿತು ಹೆಂಡತಿಯ ಉಡುಗೊರೆ-ಆಭರಣದ ಬೆಲೆ ವಿಚಾರಿಸಿ ಕೇಳುವ ಪ್ರಶ್ನೆಯೂ ಇದೆ, ಒಬ್ಬ ವಿದ್ಯಾರ್ಥಿ ಶಾಲೆ ಘೋಷಿಸಿದ ರಜಾ ದಿನಗಳನ್ನು ಕುರಿತು ಕೇಳುವ ಪ್ರಶ್ನೆಯೂ ಇದೆ, ಒಬ್ಬ ಕಾರ್ಮಿಕ ತನ್ನ ತಿಂಗಳ ಸಂಬಳ ತಂದು ತನ್ನ ಹೆಂಡತಿಗೆ ಕೊಟ್ಟಾಗ ಆಕೆ ಕೇಳುವ ಪ್ರಶ್ನೆಯೂ ಇದೆ, ಒಬ್ಬ ವ್ಯಾಪಾರಿ ದಿನ ಪೂರ್ತಿ ಗಿರಾಕಿ ಸಿಗದೆ ಸಂಜೆ ಮನೆಗೆ ಹೊರಡುತ್ತ ಕೇಳುವ ಪ್ರಶ್ನೆಯೂ ಇದೆ, ಒಬ್ಬ ರಾಜಕಾರಣಿ ಕದ್ದುಮುಚ್ಚಿ ಅವ್ಯವಹಾರಗಳನ್ನು ಮಾಡಿ ಆತನ ತಿಜೋರಿ ಕಂಡು ಕೇಳುವ ಪ್ರಶ್ನೆಯೂ ಇದೆ, ಒಬ್ಬ ಭಿಕ್ಷುಕ ದಿನಾಂತ್ಯದಲ್ಲಿ ತನ್ನ ಬೊಗಸೆ ಕಂಡು ಕೇಳುವ ಪ್ರಶ್ನೆಯೂ ಇದೆ, ಒಬ್ಬ ವೈರಾಗಿ ಮೇಲೆ ಹೇಳಿದ ಎಲ್ಲ ವಿಷಯಗಳನ್ನು, ಲೌಕಿಕ ಜಗತನ್ನು ಗಮನಿಸುತ್ತಾ ತನ್ನೊಳಗೆ ತಾನು ನಕ್ಕುತ್ತಾ ಕೇಳುವ ಪ್ರಶ್ನೆಯೂ ಇದೆ.  

ಎಷ್ಟು ವಿಚಿತ್ರ ಅಲ್ಲವೇ??? ಇನ್ನು ಹಲವು ಸಂದರ್ಭಗಳ ಉದಾಹರಣೆ ಕೊಡಬಹುದು. ಆದರೆ ನನಗೆ ತುಂಬ ಇಷ್ಟವದದ್ದು ಇಲ್ಲಿದೆ , ಯಾಕೆಂದು ಇಲ್ಲಿಯವರೆಗು ತಿಳಿದಿಲ್ಲ, ತಿಳೆದುಕೊಳ್ಳುವ ಪ್ರಯತ್ನವೂ ಮಾಡಲಿಲ್ಲ. ದಿನಂಪ್ರತಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ, ಹಲವು ಸಂಬಂಧಗಳನ್ನು ಬೆಳೆಸಿಕೊಳ್ಳೂತ್ತೇವೆ, ಹಲವನ್ನು ಕಳೆದುಕೋಳ್ಳೂತ್ತೇವೆ, ತಿಳಿದೋ ತಿಳಿದೆಯೋ ತಪ್ಪು ಮಾಡಿ ಅದಕ್ಕೆ ಸಮಜಾಯಿಶಿ ಕೊಡುತ್ತೇವೆ, ಇನ್ನು ಹಲವು ಕೆಲಸಗಳನ್ನು ಬೇಕೋ ಬೇಡವೋ ಎಂದು ತರ್ಕಿಸದೆ ಮಾಡುತ್ತೇವೆ. ಕೊನೆಗೆ ಒಂದು ದಿವಸ ಜೀವನದಲ್ಲಿ ಏನನ್ನೂ ಸಾಧಿಸದೆ ಕಣ್ಣು ಮುಚ್ಚುತ್ತೇವೆ. ಈ ಪ್ರಪಂಚದಲ್ಲಿ ಈ ಹೆಸರಿನ ಒಂದು ಪ್ರಾಣಿ ಇತ್ತು ಎಂಬ ಸುಳಿವಿಲ್ಲದೆ ಕಾಣೆಯಾಗುತ್ತೇವೆ. ಕೊನೆಗೆ "ಇಷ್ಟೇನಾ?"!!!!

ಬುಧವಾರ, ಸೆಪ್ಟೆಂಬರ್ 18, 2013

ನಮ್ಮ ಬದುಕು

ನಾನು ಹುಟ್ಟಿದಾಗಿಂದ ಬೆಂಗಳೂರು ಮಹಾನಗರದಲ್ಲೇ ಇದ್ದೀನಿ. ಈ ನಗರ ಬಿಟ್ಟು ಹೋಗಲು ಕಾಲ ಇನ್ನು ಕೂಡಿ ಬಂದಿಲ್ಲ. ಬಹಳ ಮಂದಿ ಇಲ್ಲಿಗೆ ನಾನಾ ಕರಣಗಳಿಂದ ಬರುತ್ತಾರೆ. ಬಂದವರು ಈ ಮಾಯಾನಗರಿಯ ಮೋಡಿಗೆ ಸಿಲುಕಿ ಇಲ್ಲಿಯೇ ಉಳಿಯುತ್ತಾರೆ. ಇವೆಲ್ಲ ನಮಗೆ ದೈನಂದಿನ ವಿಚಾರವೇ ಸರಿ. ಆದರೆ ಜನ ಈ ಮಾಯಾನಗರಿಯನ್ನ ಸಾಂಸ್ಕೃತಿಕ ಹಾಗು  ಐತಿಹಾಸಿಕ ನಗರಿಯಾಗಿ ಗುರುತುಹಿಡಿಯುವುದಿಲ್ಲ. ಐಟಿ/ಬೀಟಿ ಗಳ ನಗರವಾಗಿಯೂ ದೊಡ್ಡ, ಭಾರಿಯಾದ ಮಾಲ್‍ಗಳ ನಗರವಾಗಿಯೂ ಹಾಗೂ ತಂಗಲು ಅತಿ ಸೂಕ್ತವಾದ ವಾತಾವರಣವಿರುವ ನಗರವಾಗಿಯೂ ಪ್ರಸಿದ್ಧಿ ಹೊಂದಿದೆ. ಇಲ್ಲಿಯೇ ಹುಟ್ಟಿ ಬೆಳೆದ ಮಂದಿ ಸಹ ಅದೆಲ್ಲೋ ಆಕಾಶದಿಂದ ಉದುರಿರುವಹಾಗೆ ವರ್ತಿಸುವ ಪರಿಸ್ಥಿತಿ ಬಂದಿದೆ. 

ಇರಲಿ ಇದೆಲ್ಲ ನನ್ನ ಈ ಅಂಕಣದ ವಿಶಯವಲ್ಲ. ಹಿಂದೆ ತಿಳಿಸಿದ ಹಾಗೆ ನಾನು ಸರಿ ಸುಮಾರು ೨೨ ವರ್ಷಗಳಿಂದ ಈ ಸುಂದರ ನಗರಿಯಲ್ಲಿ ವಾಸಾವಗಿದ್ದೀನಿ. ಹಾಗಾಗಿ ಇಲ್ಲಿನ ಹಲವು ಜಾಗಗಳ ಪರಿಚಯವಿದೆ. ಪ್ರಮುಖ ರಸ್ತೆಗಳು, ಪ್ರಸಿದ್ಧ ಸ್ಥಳಗಳು, ಉನ್ನತ, ಪ್ರಖ್ಯಾತ ಹೋಟೆಲ್‍ಗಳು ಇತ್ಯಾದಿ ಇತ್ಯಾದಿ. ಕೆಲ ಜಾಗಗಳ ಸುತ್ತಲು ದಿನಂಪ್ರತಿ ಓಡಾಡುತ್ತಿರುತ್ತೇನೆ. ಆದರೂ ಆ ಸ್ಥಳಗಳಿಗೆ ಪ್ರತ್ಯೇಕವಾಗಿ ಭೇಟಿ ಕೊಡುವುದಿಲ್ಲ. ’ ಹೇ! ಅದು ನಾ ಹುಟ್ಟಿದಾಗಿಂದ ಇಲ್ಲೆ ಇದೆ. ಮುಂದೇನು ಇಲ್ಲೆ ಇರತ್ತೆ. ಮತ್ತೊಮ್ಮೆ ಹೋದರಾಯ್ತು’ ಎಂಬ ಮನೋಭಾವವೋ ಇಲ್ಲ ’ದಿನಾ ಸಯುವರಿಗೆ ಅಳೋದ್ಯಾರು! ದಿನಾ ನೋಡೋ ಜಾಗ/ ವಸ್ತುವಿನಲ್ಲಿನ ವಿಶೇಷವಾದರು ಏನು’ ಎನ್ನುವ ಉಡಾಫೆಯೋ ಗೊತಿಲ್ಲ. ಈ ಪ್ರಸಿದ್ಧ ಜಾಗಗಳಿಗೆ ಪ್ರತ್ಯೇಕವಾಗಿ ಹೋಗುವುದಿಲ್ಲ ಅಷ್ಟೆ!!!

ಹೀಗೆ ನನ್ನಿಂದ ಅಲಕ್ಷಿತವಾದ ಸ್ಥಳಗಳಲ್ಲಿ ಒಂದು - ದೊಡ್ಡ ಗಣಪತಿಯ ದೇವಸ್ಥಾನ ಹಾಗು ಅದರ ಸುತ್ತಲಿನ ಗುಡಿಗಳು.  ೨೨ ವರ್ಷಗಳಲ್ಲಿ ಈ ದೇವಸ್ಥಾನದ ಒಳಗೆ ನಾನು ಬೆರಳೆಣಿಕೆಯಷ್ಟು ಬಾರಿ ಹೋಗಿರಬಹುದು. ಮೊನ್ನೆಯದಿವಸ ಇದ್ದಿಕಿದ್ದಹಾಗೆ ಯಾವುದೋ ಬೋಧಿ ವೃಕ್ಷದ ತುಂಡು ಬಿದ್ದು ಜ್ಞಾನೋದಯವಾಗಿ ದೊಡ್ಡ ಗಣಪತಿ ಗುಡಿಯತ್ತ ಕಾಲು ಬೆಳೆಸಿದೆ. ಅವತ್ತು ಅಲ್ಲಿ ಗಣೇಶೋತ್ಸವದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸ್ವಲ್ಪ ಕಾಲ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಳೆದು ನಂತರ ಬಸವನ ಗುಡಿಯತ್ತ ನಡೆದೆ. ಆ ಚಿಕ್ಕ ದಿಬ್ಬ ಹತ್ತುತ್ತಾ ನನ್ನ ಬಾಲ್ಯದ ನೆನಪಾಯ್ತು. ಅಪ್ಪ ಅಮ್ಮನ ಜೊತೆ ಕೈ ಕೈ ಹಿಡೆದುಕೊಂಡು ಒಂದೊಂದೇ ಮೆಟ್ಟಿಲುಗಳನ್ನ ಕುಪ್ಪಳಿಸುತ್ತಾ ಹತ್ತುತ್ತಿದ್ದದ್ದು. ಅಲ್ಲಿ ಸಿಗುತಿದ್ದ ಆಟಿಕೆಗಳನ್ನ ಕೊಡಿಸುವಂತೆ ಅಪ್ಪನನ್ನ ಪೀಡಿಸುತ್ತಿದ್ದದ್ದು. ಇವೆಲ್ಲದರ ನೆನಪಾಯ್ತು!!! 

ಗುಡಿಗೆ ಹೋಗಿ ಬಸವನ ದರ್ಶನ ಮಾಡಿ ವಾಪಸಾಗುತಿದ್ದಾಗ ವಿಚಿತ್ರವಾದ ಆಲೋಚನೆ ಒಂದು ತಲಿಗೆ ಬಂತು. ಇದು ಎಂತಹ ವೈವಿದ್ಯಮಯವಾದ ದೇಶ!!! ಇಲ್ಲಿ ನಾವು ಒಂದು ಪ್ರಾಣಿಗೆ ದೇವಾಲಯ ಕಟ್ಟಿ ಅದಕ್ಕೆ ದೈವೀ ಶಕ್ತಿ ಇದೇ ಎಂದು ಭಾವಿಸಿ ಪೂಜಿಸಿ ಆರಾಧಿಸುತ್ತೇವೆ. ಇದರ ಅರ್ಥ ನಮಗೆ ಮೂಢನಂಬಿಕೆ ಇದೆ ಅಂತಲ??? ಇಲ್ಲ. ಇಂತಹ ಒಂದು ಆಚರಣೆಯ ಹಿಂದೆ ಯಾವುದಾದರು ಬಲವಾದ ಕಾರಣವಿರಲೇಬೇಕು. ನನ್ನ ಅಭಿಪ್ರಾಯದಲ್ಲಿ ಅಂದಿನ ಜನ ಪ್ರಕೃತಿಯ ಜೊತೆ ಅವಿನಾಭಾವ ಸಂಬಧ ಹೊಂದಿದ್ದು ಅದರಿಂದ ಪಡೆದ ಉಪಯೋಗಗಳಿಗೆ ಕೃತಜ್ಞತೆ ತೋರಿಸಲು ಹಾಗು ತಮಗೆ ಅದರ ಮೇಲಿನ ಪ್ರೀತಿ ವ್ಯಕ್ತಪಡಿಸಲು ಈ ತರಹದ ಆಚರಣೆಗಳನ್ನು ಪ್ರಾರಂಭಿಸಿರಬೇಕು. ಅದು ಬಿಟ್ಟು ಬೇರೆ ಯಾವ ಸೂಕ್ತ ಕರಣಗಳು ನನ್ನ ತಲೆಗೆ ಹೊಳೆಯಲೇ ಇಲ್ಲ. 

ಆದರೆ ನಾವು ಈಗೆನವರು ಇದರ ಅರಿವಿಲ್ಲದೆ ಸುಮ್ಮನೆ ಏನೋ ಮಾಡಬೇಕು ಅಂತ ಮಾಡುತ್ತಾ, ನಮ್ಮ ಪೂರ್ವಿಕರನ್ನು ದೂಷಿಸುತ್ತಾ ಅಲಗಳಿಯುತ್ತಾ ಬದುಕು ಸಾಗಿಸುತ್ತೀವಿ. ಅದಲ್ಲದೆ ನಾವುಗಳು  ಪಾರ್ಟಿ/ ಮಾಲ್ ’ಕಲ್‍ಚರ್’ಗೆ ಮೊರೆ ಹೋಗಿ ಇಂತಹ ಮಹತ್ವದ ಅರ್ಥವತ್ತಾದ ಆಚರಣೆಗಳನ್ನ ಬಿಟ್ಟು ಅತಿ ಸೂಕ್ಷ್ಮ ವಿಷಯಗಳನ್ನ ಮರೆತು ಯಾಂತ್ರಿಕ ಬದುಕೇ ಬದುಕು ಎಂಬ ಭ್ರಮೆಯಲ್ಲಿ ಕಾಲ ಕಳೆಯುತ್ತಿದ್ದೀವಿ. ಇದು ನಮ್ಮ ಬದುಕು ಅಂದುಕೊಂಡು ನಕ್ಕು ಮನೆಗೆ ಹೊರೆಟೆ!!!