ಬುಧವಾರ, ಜುಲೈ 7, 2010

ಹರಿಹರಪುರದತ್ತ ಪಯಣ

ಅಂತೂ ಯೋಗ ಪರೀಕ್ಷೆಯೊಂದಿಗೆ ನಮ್ಮ ಎರಡನೆ ಸೆಮಿಸ್ಟರು ಸಂಪೂರ್ಣವಾಯ್ತು. ಮುಂದೆ ಒಂದು ತಿಂಗಳು ಅಂದರೆ ಮೆ ೧೪ ಅರಿಂದ ಜೂನ್ ೧೪ ವರೆಗೂ ರಜೆ. ಏನೇ ಹೇಳಿ ರಜೆಗಳನ್ನು ಕಳೆಯುವುದು ಅತಿ ಕ್ಲಿಷ್ಟಕರವಾದ ಕೆಲಸ.
ನನ್ನ ರಜೆಯ ಶುರುವೇ ಪ್ರಯಾಣದಿಂದಾಯಿತು. ೧೬ ನೇ ತಾರೀಖಿನಿಂದ ೨೦ ತಾರೀಖಿನವರಗೂ ನಾನು ನನ್ನ ತಮ್ಮನ ಮುಂಜಿಯ ಪ್ರಯುಕ್ತ ಊರಿಗೆ ಹೋಗಬೇಕಿತ್ತು. ಊರು ಎಂದರೆ ನಮ್ಮ ಹುಟ್ಟೂರು ಅಂತಲ್ಲ. ನನ್ನ ಮಾವ, ಅವರ ಎರಡನೆಯ ಮಗನ ಮುಂಜಿಯನ್ನು ಹರಿಹರಪುರದ ಶ್ರೀ ಮಠದಲ್ಲಿ ಮಾಡಬೇಕೆಂದು ಸಂಕಲ್ಪಿಸಿದ್ದರು.
ಈ ಹರಿಹರಪುರ ಶೃಂಗೇರಿಯಿಂದ ಸುಮಾರು ೨೦ ಕಿಮಿ ದೂರದಲ್ಲಿದೆ. ಒಂದು ಪ್ರತೀತಿಯ ಪ್ರಕಾರ ಶ್ರೀ ಶಂಕರರು ಶಾರದಾ ಮಾತೆಯನ್ನು ಕರೆತರುವಾಗ, ಶಾರದಾಂಬೆಯು ಇಲ್ಲಿ ಮೊದಲು ನೆಲೆಸಿದಳಂತೆ. ನಂತರ ಶಂಕರರು ಪ್ರಾರ್ಥಿಸಿ ಶಾರದೆಯನ್ನು ಶೃಂಗೇರಿಯಲ್ಲಿ ನೆಲೆಸುವಂತೆ ಕೋರಿದರಂತೆ. ಹಾಗಾಗಿ ಇಲ್ಲಿಯೂ ಕೂಡ ಶಾರದಾಂಬೆಯು ನೆಲೆಸಿದ್ದಾಳೆ. ಮತ್ತೆಂದು ಪೌರಾಣಿಕ ಹಿನ್ನಲೆ ಉಂಟು ಈ ಕ್ಷೇತ್ರಕ್ಕೆ. ಹಿಂದಿ ದಕ್ಷ ಪ್ರಜಾಪತಿಯು ಯಜ್ಞ ಒಂದನ್ನ ಮಾಡುತ್ತಾನೆ, ಈ ಯಜ್ಞನಕ್ಕೆ ಎಲ್ಲ ದೇವಾನುದೇವತೆಗಳನ್ನು ಕರೆದಿರುತ್ತಾನೆ, ಶಿವನೊಬ್ಬನನ್ನು ಬಿಟ್ಟು. ನಂತರ ಶಿವನ ಪತ್ನಿ ದಾಕ್ಷಾಯಣಿಯು ಶಿವನ ಅನುಮತಿಯನ್ನು ಕೋರಿ ಯಜ್ಞಕ್ಕೆ ಹೋಗುತ್ತಾಳೆ. ಅಲ್ಲಿ ಅವಳ ತಂದೆ ಶಿವನನ್ನು ಅವಮಾನಿಸಿದ್ದಲ್ಲದೇ ಕರೆಯದೇ ನೀನೇಕೆ ಬಂದೆ ಎಂದು ಕೇಳುತ್ತಾನೆ. ಇದನ್ನು ಕೇಳಿ ದಾಕ್ಷಾಯಣಿ ಅದೇ ಹೋಮ ಕುಂಡದಲ್ಲಿ ಜಿಗಿದು ಪ್ರಾಣಬಿಡುತ್ತಾಳೆ. ಈ ಸುದ್ಧಿ ತಿಳಿದ ಪರಶಿವನು ಕೋಪದಿಂದ ತನ್ನ ಜಟೆಯಿಂದ ವೀರಭದ್ರನನ್ನು ಸೃಷ್ಟಿಸಿ ದಕ್ಷನ ತಲೆ ಕತ್ತರಿಸಲು ಕಳಿಸುತ್ತಾನೆ. ವೀರಭದ್ರನು ಹಾಗೆ ಮಾಡುತ್ತಾನೆ. ಎಲ್ಲ ದೇವತೆಗಳು ಭಯಭೀತರಾಗಿ ವಿಷ್ಣುವನ್ನು ಪ್ರಾಥಿಸುತ್ತಾರೆ. ನಂತರ ಹರಿಯು ಹರನ ಕೋಪವನ್ನು ಶಮನಗೊಳಿಸಿ ದಕ್ಷನಿಗೆ ಮೇಷದ ತಲೆ(ಕುರಿ) ಕೊಟ್ಟು ಕರುಣಿಸುತ್ತಾನೆ. ಇದೆಲ್ಲಾ ನಡೆದ ಪುಣ್ಯಸ್ಥಳ ಇದೇ ಎಂದು ಮತ್ತೊಂದು ಪ್ರತೀತಿ..
ಈ ಕ್ಷೇತ್ರವು ನಿಜವಾಗಿಯೂ ಶಾಂತವಾಗಿ ಮತ್ತು ಸುಂದರವಾಗಿ ಇದೆ. ತುಂಗಾ ತೀರದಲ್ಲಿ ಉಪಸ್ಥಿತವಿರುವ ಶ್ರೀ ಶಂಕರ ಸ್ಥಾಪಿತ ಮಠದಲ್ಲಿ ಶ್ರೀ ಲಕ್ಷ್ಮಿನೃಸಿಂಹ ದೇವರು ಕೂಡ ಇದೆ. ಅಂತು ಒಂದು ಪುಣ್ಯ ಸ್ದಳದಲ್ಲಿ ಸುಮಾರು ಐದು ದಿವಸಗಳು ಬಲುಬೇಗ ಜಾರಿದವು.
ಮತ್ತಷ್ಟು ಕಥೆಯನ್ನು ಮುಂದಿನ ಭಾಗದಲ್ಲಿ ಕೊರಿತೀನಿ.. :)