ಬರೀ ವಯಸ್ಸು ಬೆಳೆದರೆ ಮಾತ್ರ ’ದೊಡ್ಡವರು’ ಎಂದು ಕರೆಯಲು ಅರ್ಹರೇ? ಹು ಎಂದರೆ ಮೂರ್ಖತ್ವವಾಗಬಹುದು. ಇಲ್ಲ ಎಂಬುದೇ ಉತ್ತರವಾದರೆ ಮರುಪ್ರಶ್ನಿಸಬೇಕಾಗುತ್ತದೆ. ಹಾಗಿದ್ದರೆ ’ದೊಡ್ಡತನ’ ಎಂದರೇನು? ಯಾರ್ಯಾರನ್ನ ಕಂಡು ’ಅವರದ್ದು ದೊಡ್ಡ ಗುಣ’ ಎಂದು ಶ್ಲಾಘಿಸಬಹುದು? ಈ ಪ್ರಶ್ನೆಗಳಿಗೆ ಉತ್ತರ ವೈಯಕ್ತಿಕವಾದದ್ದು. ಪ್ರತಿ ಪ್ರಶ್ನೆಗೂ ಅರ್ಥ ವಿವರಣೆ ಕೊಟ್ಟು, ಚರ್ಚಿಸಿ ಅವರವರ ಮೂಗಿನ ನೇರಕ್ಕೆ ವಿವರಣೆ ನೀಡಬಹುದು. ಈ ಅಂಕಣದಲ್ಲಿ ನಾನು ಮೇಲಿನ ಯಾವ ಪ್ರಶ್ನೆಗಳಿಗೂ ಉತ್ತರ ಕೊಡಬಯಸುತಿಲ್ಲ. ಆ ಮಟ್ಟದ ಪರಿಣತಿಯಾಗಲಿ , ವಿಚಾರಗಳಾಗಲಿ, ಅನುಭವವಾಗಲಿ ನನ್ನಲ್ಲಿ ಸಧ್ಯಕ್ಕೆ ಇಲ್ಲ. ಇಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಹಂಚಿಕೊಂಡು ಅದರಿಂದ ನನ್ನ ಅರಿವಿಗೆ ಬಂದ ಕೆಲ ಅಂಶಗಳನ್ನು ತಿಳಿಸುವ ಉದ್ದೇಶವಷ್ಟೆ.
ಕಳೆದ ಭಾನುವಾರ ನಮ್ಮ ಊರಾದ ವಿಜಯಪುರದಲ್ಲಿ ಶ್ರೀ ಚೆಲುವನಾರಾಯಣ ಸ್ವಾಮಿಯ ಉತ್ಸವ ಹಾಗು ತೇರು ಇತ್ತು. ಪ್ರತಿ ವರ್ಷ ಕಾಮನ ಪೌರ್ಣಮಿಯಂದು ಈ ಕಾರ್ಯಕ್ರಮ ನಡೆಯುವುದು ವಾಡಿಕೆ. ಸಾಮಾನ್ಯ ಈ ಹೊತ್ತಿಗೆ ನನಗೆ ಪರೀಕ್ಷೆ ನಡೆಯುವ ಕಾರಣ ಪ್ರತಿ ವರ್ಷ ಹೊಗಲಾಗುವುದಿಲ್ಲ. ಅವಕಾಶ ಸಿಕ್ಕಿದ್ರೇ ಬಿಡಲ್ಲ. ಈ ಬಾರಿ ಭಾನುವಾರವಾಗಿದ್ದು ಹೋಗಲು ಒಳ್ಳೆಯ ಅವಕಾಶವಾಯ್ತು. ತೇರು ಮಧ್ಯಾನವಾದ್ದರಿಂದ ಬೆಳಿಗ್ಗೆ ಸುಮ್ಮನೆ ಹೋಗಿ ಊರಿನ ಮನೇಲಿ ಕೂರೋದರ ಬದಲು ಬೇರೆ ಎಲ್ಲಿಯಾದರು ಹೋಗಿ ನಂತರ ಊರಿನತ್ತ ಹೋಗುವ ಯೋಜನೆ ನಡೆದಿತ್ತು.
ಯಾವಾಗಲೊ ಚಿಕ್ಕವನಾಗಿದ್ದಾಗ ನೊಡಿ ಮರೆತಿದ್ದ ಕೈವಾರದತ್ತ ಪಯಣ ಶುರುವಾಯ್ತು ಭಾನುವಾರ ಬೆಳಿಗ್ಗೆ. ಕೈವಾರ ಕ್ಷೇತ್ರವು ಕೋಲಾರ, ಸುತ್ತಮುತ್ತಲಿನ ಹಳ್ಳಿಗಳು ಹಾಗು ಆಂಧ್ರದಲ್ಲಿ ಪ್ರಸಿದ್ಧವಾಗಿದೆ. ಅಲ್ಲಿನ ತಾತಯ್ಯನವರ ತತ್ವಪದಗಳು ನಮ್ಮ ಜಾನಪದದಲ್ಲಿ ಆಳವಾಗಿ ಬೇರುಬಿಟ್ಟಿದ್ದರು ಹೆಚ್ಚು ಪ್ರಚಾರದಲಿಲ್ಲವೆಂದರೆ ತಪ್ಪಾಗಲಾರದು. ಅವರು ೧೮ ನೇ ಶತಮಾನದಲ್ಲಿಯೇ ತಪೋಶಕ್ತಿಯಿಂದ ಕಾಲಜ್ಞಾನವನ್ನು ಬರೆದಿದ್ದಾರೆ. ಈ ಎಲ್ಲವನ್ನು ಕೆಳಿದ್ದ ನನಗೆ ಅದೇನೋ ಉಲ್ಲಾಸವಿತ್ತು ಈ ಕ್ಷೇತ್ರವನ್ನು ಸಂದರ್ಶಿಸಲು.
ಬೆಳಗ್ಗೆ ಸುಮಾರು ೧೦ರ ಹೊತ್ತಿಗೆ ನಾವು ಕೈವಾರ ತಲುಪಿ ದೇವಸ್ಥಾನದ ಒಳಗೆ ಹೊಕ್ಕವು. ಪ್ರತಿ ಹುಣ್ಣಿಮೆಯಂದು ತಾತಯ್ಯನವರಿಗೆ ಹಾಗು ಅವರ ಆರಾಧ್ಯ ದೈವವಾದ ಅಮರನಾರಾಯಣನಿಗೆ ತೇರೊತ್ಸವ ಮಾಡುವುದು ಅಲ್ಲಿನ ಪದ್ಧತಿ. ಅದರ ಸಲುವಾಗಿ ಕೈಂಕರ್ಯಗಳು ಜರಗುತ್ತಿದ್ದವು. ಅಲ್ಲಿ ದರ್ಶನ ಮುಗಿಸಿ ಅದೇನು ಹುಮ್ಮಸ್ಸಿನಿಂದ ಹೊರಬಂದೆವು. ಬಹುಶಃ ಸ್ಥಳ ಮಹಿಮೆ ಇರಬೇಕು!!! ಅಪ್ಪನಿಗೆ ಅವರ ಗೆಳೆಯರೊಬ್ಬರು ಹತ್ತಿರದಲ್ಲಿ ಕೈಲಾಸ ಗಿರಿ ಎಂಬ ಕ್ಷೇತ್ರವಿದೆ ಮರೆಯದೆ ಸಂದರ್ಶಿಸಿ ಎಂದಿದ್ದರಂತೆ. ಅಲ್ಲಿನ ಜನರನ್ನು ದಾರಿ ಕೇಳಿ ಸುಮಾರು ೬ ಕಿ.ಮಿ. ಪ್ರಯಾಣಿಸಿ, ಬೆಟ್ಟವನ್ನು ಹತ್ತಿ ಕೈಲಾಸಗಿರಿ ಕ್ಷೇತ್ರವನ್ನು ತಲುಪಿದ್ದೆವು. ಒಂದು ಬೆಟ್ಟವನ್ನು ಕೊರೆದು ಅದರೊಳಗೆ ದೇವಸ್ಥಾನಗಳನ್ನ ನಿರ್ಮಿಸಿದ್ದಾರೆ. ತುಂಬ ಸುಂದರವಾಗಿದೆ. ಗಾಡಿ ನಿಲ್ಲಿಸಿವ ಸ್ಥಳದಿಂದ ಸುಮಾರು ೨೦೦ ಮೀಟರ್ ನಷ್ಟು ಬೆಟ್ಟಹತ್ತಬೇಕು. ಮೇಲೆ ಸೂರ್ಯನು ನಿಗಿನಿಗಿಯುತ್ತಿದ್ದ, ಬೆಟ್ಟ ಹತ್ತಿ ತುಂಬ ಆಯಾಸವಾಗಿತ್ತು. ಅಲ್ಲೆ ಒಬ್ಬ ಹುಡುಗ ಬಹುಶಃ ಮಾಧ್ಯಮಿಕ ಶಾಲಾ ವಿದ್ಯಾರ್ಥಿ ಇರಬೇಕು, ಎಳೇ ಸೌತೆಕಾಯಿಗಳನ್ನ ಮಾರುತ್ತಿದ್ದ. ಆಸೆಯಾಗಿ ನಾನು ಅಪ್ಪ ಒಂದು ತೆಗೆದುಕೊಂಡು ತಿನ್ನಲಾರಂಭಿಸಿದೆವು. ಆದರೆ ಅದು ತುಂಬ ಕಹಿಯಾಗಿತ್ತು ಆ ಹುಡುಗನಿಗೆ ’ಮರಿ ತುಂಬ ಕಹಿ ಇದ್ಯಲ್ಲೋ’ ಎಂದು ಕಷ್ಟಪಟ್ಟು ಮತ್ತೊಂದು ತುಂಡು ತೆಗೆದುಕೊಂಡೆವು. ಅದನ್ನು ಕೇಳಿದ ಹುಡುಗ ಕ್ಷಣಮಾತ್ರದಲ್ಲಿ ’ಹೋಗ್ಲಿ ಬಿಸಾಡಿ ಅಣ್ಣಾ ಬೇರೆಯ ಕಾಯಿ ಕೊಡುತ್ತೆನೆ’ ಎಂದು ಮತ್ತೊಂದು ಕಾಯಿ ಕೈಗಿತ್ತನು. ’ಎಷ್ಟ್ ಕೊಡ್ಬೇಕು’ ಎಂಬ ಪ್ರಶ್ನೆಗೆ ’ಹತ್ ರೂಪಾಯಿ ಸಾಕು’ ಎಂದು ಬರೀ ಒಂದರ ಬೆಲೆ ಹೇಳಿದ. ಕೇಳಿದ ಮರು ಕ್ಷಣವೆ ನಮಗೆ ಸಂತಸವಾಯ್ತು.
ಕಹಿ ಕಾಯಿ ಬಂದದ್ದು ಅವನ ತಪ್ಪೆನು ಅಲ್ಲ ನಮ್ಮ ಅದೃಷ್ಟ ಆದರೆ ಆ ಹುಡುಗ ತಾನು ಜವಾಬ್ದಾರಿ ಹೊತ್ತು ಮತ್ತೊಂದು ಕಾಯಿ ಬಿಟ್ಟಿಯಾಗಿ ಕೊಡೋ ಅವಶ್ಯಕತೆ ಇರಲಿಲ್ಲ. ಅದೊಂದು ಸಣ್ಣ ವಿಷಯದಲ್ಲಿ ತನ್ನ 'ದೊಡ್ಡತನವನ್ನು' ತೋರಿಸಿದ್ದ ಆ ಹುಡುಗ. ಸಣ್ಣ ಸಣ್ಣ ವಿಚಾರಗಳಲ್ಲೆ ನಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಬಹುದು ಎಂಬ ನೀತಿಯನ್ನು ಆ ಹುಡುಗ ನಮಗೆ ನೀಡಿದ್ದ. ಆ ವಯಸ್ಸಿನಲ್ಲಿ ಇಷ್ಟರಮಟ್ಟಿಗೆ ಆತ ವಿಚಾರಿಸಬಲ್ಲ ಎಂದರೆ ಆತನ ಗುಣ ನಿಜವಾಗಿಯು ’ದೊಡ್ಡದು’ ಎಂಬುದು ನನ್ನ ಭಾವನೆ. ಆತ ಹಾಗೆ ನಡೆದುಕೊಳ್ಳಲು ಕಾರಣಗಳು ಬೇರೇನೆ ಇದ್ದಿರಬಹುದು, ಆತನ ದೃಷ್ಟಿಕೋಣೆ ಬೇರೆಯಾಗಿದ್ದಿರಬಹುದು. ಇದು ಸಂಪೂರ್ಣವಾಗಿ ನನ್ನ ಅನಿಸಿಕೆ - ನಾನು ಕಲೆತ ಗುಣಪಾಠ!!!